ಎನ್ಕೆ, ಜೋಹಾನ್ ಫ್ರಾನ್‍ಜ್ó
	1791-1865. ಜರ್ಮನ್ ಖಗೋಳಶಾಸ್ತ್ರಜ್ಞ. ಜನನ ಹ್ಯಾಂಬರ್ಗಿನಲ್ಲಿ. ಗೊಟ್ಟಿಂಗೆನ್ನಿನಲ್ಲಿ ಗಾಸ್‍ನ ಶಿಷ್ಯನಾಗಿ ವಿದ್ಯಾಭ್ಯಾಸ ನಡೆಸಿದ. ನೆಪೋಲಿಯನ್ನನ ಕೊನೆಕೊನೆಯ ಯುದ್ಧಗಳಲ್ಲಿ ಭೂಸೈನ್ಯದಲ್ಲಿ ಅಧಿಕಾರಿಯಾಗಿದ್ದ. ಸೈನ್ಯದಿಂದ ಹಿಂತಿರುಗಿದ ಮೇಲೆ ಖಗೋಳಶಾಸ್ತ್ರ ಇವನ ಆಸಕ್ತಿಯ ವಿಷಯವಾಯಿತು. ಆಕಾಶಕಾಯಗಳ ಪಥಗಳನ್ನು ಗುಣಿಸುವ ಹೊಸ ವಿಧಾನವೊಂದನ್ನು ಈತ ಕಂಡುಹಿಡಿದ. ಅನಂತರ ಧೂಮಕೇತುಗಳ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ವಿಶೇಷ ಪರಿಶ್ರಮ ಪಡೆದ. 1786, 1795 ಮತ್ತು 1805ರಲ್ಲಿ ಕಾಣಿಸಿಕೊಂಡ ಧೂಮಕೇತವೂ ಹಾನ್ಸ್ 1818ರಲ್ಲಿ ತೋರಿಸಿದ ಧೂಮಕೇತುವೂ ಒಂದೇ ಎಂದು ತೋರಿಸಿಕೊಟ್ಟ. 1819ರಲ್ಲಿ ಇದರ ಕಕ್ಷೆಯನ್ನು ಗುಣಿಸಿದ. ಮುಂದೆ ಇದನ್ನು ಎನ್ಕೆ ಧೂಮಕೇತು (ಎನ್ಕೆ ಕಾಮೆಟ್) ಎಂದೇ ಕರೆಯಲಾಯಿತು. ಅಂದಿನ ವರೆಗೆ ಗುರುತಿಸಿದವುಗಳಲ್ಲಿ ಇದರ ಅವಧಿ (ಪೀರಿಯಡ್) ಹ್ರಸ್ವತಮವಾಗಿದೆ-ಕೇವಲ 3.3 ವರ್ಷಗಳು ಮಾತ್ರ. ಈ ಧೂಮಕೇತು ಬುಧಗ್ರಹ ಮತ್ತು ಸೂರ್ಯರ ನಡುವೆ ಹಾಯುವಾಗ ಸೂರ್ಯನಿಗೆ ಸಮೀಪವಾಗಿರುತ್ತದೆ. ಆಗ ಬುಧಗ್ರಹದ ಗುರುತ್ವಾಕರ್ಷಣೆಯಿಂದಾಗಿ ಧೂಮಕೇತುವಿನ ಪಥದಲ್ಲಾದ ಬದಲಾವಣೆಗಳನ್ನು ವೀಕ್ಷಿಸಿ ಎನ್ಕೆ ಬುಧದ ದ್ರವರಾಶಿಯನ್ನು ಗುಣಿಸಿದ (1835). 1761 ಮತ್ತು 1769ರಲ್ಲಾದ ಶುಕ್ರಸಂಕ್ರಮಣಗಳನ್ನಾಧರಿಸಿ ಸೂರ್ಯನ ದೂರವನ್ನು ಗುಣಿಸಿದ (1824). ಈ ವಿಧಾನವನ್ನುಸರಿಸಿದವರಲ್ಲಿ ಈತನೇ ಮೊದಲಿಗ.

	ಕೆಲಕಾಲ ಸೀಬರ್ಗ್ ವೀಕ್ಷಣಾಲಯದ ನಿರ್ದೇಶಕನಾಗಿದ್ದ. 1825ರಲ್ಲಿ ಬರ್ಲಿನ್ ವೀಕ್ಷಣಾಲಯದ ನಿರ್ದೇಶಕನಾಗಿ 40 ವರ್ಷದ ಕಾಲ ಅದೇ ಹುದ್ದೆಯಲ್ಲಿದ್ದ.					   
(ಪರಿಷ್ಕರಣೆ: ಬಿ. ಎಸ್. ಶೈಲಜಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ